Wednesday, April 30, 2014

Nambike



     ನಂಬಿಕೆಯೇ ಪ್ರೀತಿಯ ತಳಹದಿ. ನಂಬಿಕೆ ಇಲ್ಲದೆ ಪ್ರೀತಿ ಇಲ್ಲ, ಪ್ರೀತಿ ಇಲ್ಲದೆ ನಂಬಿಕೆ ಇಲ್ಲ. ನಾವು ನಂಬಿದವರನ್ನು ಪ್ರೀತಿಸುತ್ತೇವೆ, ಪ್ರೀತಿಸಿದವರನ್ನು ನಂಬುತ್ತೇವೆ. ನಂಬಿಕೆ ಮತ್ತು ಪ್ರೀತಿ ಒಂದೇ ನಾಣ್ಯದ ಎರಡು ಮುಖ ಇದ್ದಂತೆ. ನಂಬಿಕೆ, ವಿಶ್ವಾಸವೇ ಜೇವನ. ನಂಬಿಕೆಯೇ ಮಾನವ ಜೀವನದ ಬೆನ್ನೆಲುಬು. ಇದನ್ನು ಅನುಸರಿಸಿ ಬಾಳುವುದೇ ಸದಾಚಾರ ಸಂಪನ್ನ ಜೀವನ ಶೈಲಿ. ಇದುವೇ ಮಾನವೀಯ ಗುಣಗಳು. ಮಾನವೀಯ ಮೌಲ್ಯಗಳು. ಇದನ್ನು ಜೀವನದಲ್ಲಿ ಅಳವಡಿಸುವವನು ಆದರ್ಶ ಪುರುಷನಾಗುತ್ತಾನೆ.

     ಮನುಷ್ಯ ಜೀವನಕ್ಕೆ ನಂಬಿಕೆಯೇ ಮೂಲ ಆಧಾರ. ನಂಬಿಕೆ ಇಲ್ಲದೆ ಮಾನವ ಜೀವಿಸಲಾರ. ಒಬ್ಬರನ್ನೊಬ್ಬರು ಪರಸ್ಪರ ನಂಬುವ ಮೂಲಕವೇ ಜಗತ್ತಿನ ಎಲ್ಲಾ ಸಂಭಂಧವು, ವ್ಯವಹಾರಗಳು ನಿಂತಿರುವುದು. ಒಟ್ಟಿನಲ್ಲಿ ನಂಬಿಕೆ ಇಲ್ಲದ ಬದುಕಿಲ್ಲ. ನಂಬಿ ಬಾಳುವುದೇ ಬದುಕು.

     ಅಂತಹ ನಂಬಿಕೆಗೆ ಒಂದು ಉತ್ತಮ ಉದಾಹರಣೆ ಎಂದರೆ ಇಂದು ಮುಳುಗಿದ ಸೂರ್ಯ ನಾಳೆ ಮತ್ತೆ ಉದಯಿಸುತ್ತಾನೆ ಎಂಬ ನಂಬಿಕೆಯಲ್ಲೇ ನಾವು ಬದುಕಿದ್ದೇವೆ. ಸುಂದರವಾದ ನಾಳೆಗಳು ನಮಗಾಗಿ ಕಾದಿದೆ ಎಂಬ ನಂಬಿಕೆ, ವಿಶ್ವಾಸದಲ್ಲೇ ನಮ್ಮ ಬದುಕು ಸಾಗುತ್ತಿರುವುದು. ಆ ನಂಬಿಕೆ ಸುಳ್ಳಾದರೆ ಬದುಕು ನಾಶವಾಗುವುದು ಖಚಿತ. ಹುಡುಗ ಹುಡುಗಿಯರ ನಡುವೆ ಪ್ರೀತಿ ಬೆಳೆಯಬೇಕಾದರೆ ನಂಬಿಕೆ ಇರಬೇಕು, ತಾಯಿ ಮಗುವನ್ನು ನಂಬುತ್ತಾಳೆ, ಮಗು ಹೆತ್ತವರನ್ನು ನಂಬಿ ಬದುಕುತ್ತದೆ. ಹೀಗೆ ಒಬ್ಬರು ಮತ್ತೊಬ್ಬರನ್ನು ನಂಬಿಯೇ ಬಾಳುತ್ತಾರೆ. ಯಾರನ್ನೂ ನಂಬದೆ, ಯಾವುದನ್ನೂ ನಂಬದೆ ಬಾಳಿದವರು ಯಾರೂ ಇಲ್ಲ. ಒಂದಲ್ಲಾ ಒಂದನ್ನು ಜೀವನದಲ್ಲಿ ನಂಬಲೇ ಬೇಕು.

     ಜಗತ್ತಿನ ಎಲ್ಲಾ ಮಾನವ ಸಮುದಾಯವು ನಂಬಿಕೆಯ ಮೇಲೆ ನಿಂತಿದೆ. ಆ ನಂಬಿಕೆಯೇ ಎಲ್ಲಾ ವ್ಯವಹಾರಗಳು ಸುಗಮವಾಗಿ ಸಾಗುವಂತೆ ಮಾಡಿದೆ. ಬರುವ ನಾಳೆಯು ನಿರೀಕ್ಷೆಯು ನಿತ್ಯ ಸತ್ಯವಾಗಿ ನಂಬಿಕೆಯ ಮಹತ್ವವನ್ನು ಉಳಿಸಿದೆ.    

No comments:

Post a Comment