ಆಗ ಶ್ರಾವಣ ಮಾಸ, ವರ್ಷಧಾರೆಯ ಆರಂಭದ ಕಾಲ. ಆಗ ತಾನೇ ಕಾಲೇಜು ಮುಗಿಸಿ ನೌಕರಿಯ ಹುಡುಕಾಟದಲ್ಲಿದ್ದೆ. ಬರಿ ಕನಸು ಕಾಣುತ್ತಲೇ ಜೀವನವನ್ನು ಸಾಗಿಸಿದವನು ನಾನು. ಕನಸುಗಳೆಂದರೆ ನನಗೆ ಒಂದು ರೀತಿಯ ಸಂತೋಷ. ಅದು ರಾತ್ರಿ ಬೀಳುವ ಕನಸಲ್ಲ, ನನ್ನ ಕಲ್ಪನೆಯಲ್ಲಿ ಅರಳುವ ಕನಸು. ಅದು ಒಂದು ರೀತಿಯ ರೋಮಾಂಚನವಾದದ್ದು. ಒಂದು ಸುಂದರವಾದ ಕಲ್ಪನಾ ಲೋಕದಲ್ಲಿ ವಿಹರಿಸುವ ಅನುಭವ ನನ್ನದೇ ಆದ ಪ್ರಪಂಚದಲ್ಲಿ ನಾನು ಕಟ್ಟಿದ ಕನಸಿನ ಲೋಕ. ಆದರೆ ಅಂದುಕೊಂಡ ಹಾಗೆ ನಡೆಯುತ್ತದೆಯೇ? ಯೋಚಿಸಿದ ಜೀವನವೇ ಬೇರೆ, ಬಯಸಿದ ಜೀವನವೇ ಬೇರೆ. ಆದರು ಕನಸು ಕಾಣುವುದೇ ನನ್ನ ಬದುಕಾಗಿತ್ತು. ಹದಿ ಹರೆಯದ ವಯಸ್ಸಿನಲ್ಲಿ ನೌಕರಿಯ ಜಿಂತೆ ಭಾದಿಸುತ್ತಿದ್ದರು ಬಾಳ ಸಂಗಾತಿಯ ಕಲ್ಪನೆಯೇ ಹೆಚ್ಚಾಗಿತ್ತು.
ಏನೇನೋ ಬಯಕೆ, ಕಲ್ಪನೆ. ಮನಸಿನಲ್ಲಿ ಹೊಸದೊಂದು ಅನುಭವ. ವರ್ಣರಂಜಿತವಾದ ವಿಸ್ಮಯ ಎನ್ನಬಹುದು. ಎರಡು ಮನಸು, ದೇಹಗಳನ್ನು ಒಂದು ಗೂಡಿಸುವ ಸಮಯ. ಪರಸ್ಪರ ಹೊಂದಾವಣಿಕೆಯ ಮೇಲೆ ಜೀವನ ಸಾಗಿಸುವ ಪರಿಯೇ ವಿವಾಹದ ಸಂಕೇತ. ಅಂತಹ ಸುಸಂದರ್ಭ ನನ್ನ ಬದುಕಿನಲ್ಲಿ ಈಗ ಬರುತ್ತಿದೆ ಎನ್ನುವ ಕಾತುರ. ಮನೆಯವರು ಬಲವಂತವಾಗಿ ನೌಕರಿಗೂ ಮುನ್ನವೇ ಹೆಣ್ಣು ನೋಡಲು ಕರೆದುಕೊಂಡು ಹೋದರು.
ಅಲ್ಲೇ ನೋಡಿ ಮೊದಲ ನೋಟಕ್ಕೆ ನನ್ನ ಮನಸ್ಸನ್ನು ಅವಳಿಗೆ ಅರ್ಪಿಸಿಬಿಟ್ಟೆ. ಮುಂಗುರುಳ ಅಂಚಲ್ಲಿ ನಾಚಿಕೆಯಿಂದ ನನ್ನತ್ತ ನೋಡಿದಾಗ ಪ್ರೀತಿಯ ಮಧುರವಾದ ಸಿಂಚನ ಎದೆಗೆ ಬಡಿದಂತಾಯಿತು. ಮಲ್ಲಿಗೆ ಮುಡಿದು ಮನಸ್ಸನ್ನು ಸೆಳೆದಳು. ಕಿರುನಗೆ ಬೀರಿ ನನ್ನನ್ನು ಸಂಪೂರ್ಣವಾಗಿ ಸೋಲಿಸಿಬಿಟ್ಟಳು.
ನನ್ನ ಕಲ್ಪನೆಯ ಹುಡುಗಿ, ನನ್ನ ಬಾಳ ಸಂಗಾತಿಯಾಗಿ ಹೇಗಿರಬೇಕು ಎಂದುಕೊಂಡಿದ್ದೆನೋ ಹಾಗೆ... ಹಾಗೆಯೇ ಇದ್ದಳು. ಅವಳ ಆಲಿಂಗನದಲ್ಲಿ ಮಧುರವಾದ ಅಪ್ಪುಗೆಯಲ್ಲಿ ನಾನು ಸಂಪೂರ್ಣವಾಗಿ ಬಂಧಿಯಾಗಿ ಹೋಗಿದ್ದೆ.
ನಾನು ಕಂಡ ಕನಸುಗಳಲ್ಲೆಲ್ಲಾ ನನಸಾಗಿದ್ದ ಒಂದೇ ಒಂದು ಕನಸೆಂದರೆ ಅದು ಅವಳೆ. ಈ ಜೀವಕ್ಕೆ ಆಸರೆಯಾಗಿ ಬಂದವಳು. ಮನಸ್ಸನ್ನು ತುಂಬಿ ಬದುಕಿಗೆ ಬೆಳಕಾದವಳು. ಅವಳನ್ನು ವಿವಾಹವಾಗುತ್ತಲೇ ದೊಡ್ಡ ಹುದ್ದೆಯೊಂದು ನನಗೆ ದೊರಕಿತು. ನೆಮ್ಮದಿಯಾದ, ಸಂತೋಷಮಯ ಜೀವನ ನಮ್ಮದಾಯಿತು. ಕನಸುಗಳ ಹಾದಿಯಲ್ಲೇ ಜೀವನ ಸಾಗಿ ಬಂತು.
-ಜಿ.ಕೆ.