Sunday, February 18, 2024

ಪೂರ್ವ ಜನ್ಮದ ಫಲ ಈ ಜನ್ಮದಲ್ಲಿ ಅನುಭವಿಸಿ ತಿರಲೇಬೇಕು

ಶ್ರೀ ಕೃಷ್ಣ ಕಂಸನನ್ನು ಕೊಂದ ನಂತರ ತನ್ನ ಮಾತಾ ಪಿತೃಗಳಾದ ವಾಸುದೇವ ಮತ್ತು ದೇವಕಿಯನ್ನು ಬಿಡುಗಡೆ ಮಾಡಲು ಅಲ್ಲಿನ ಸೆರೆಮನೆಗೆ ಹೋದ.

ತಾಯಿ ದೇವಕಿ ಉತ್ಸಾಹದಿಂದ ಕೇಳಿದಳು: "ಮಗು... ನೀನೇ ದೇವರು ಮತ್ತು ನಿನಗೆ ದೈವಿಕ ಶಕ್ತಿಗಳಿವೆ. ಹಾಗಾದರೆ ಕಂಸನನ್ನು ಕೊಂದು ನಮ್ಮನ್ನು ಬಿಡುಗಡೆ ಮಾಡಲು ನೀನು ಹದಿನಾಲ್ಕು ವರ್ಷ ಏಕೆ ಕಾಯುತ್ತಿದ್ದೆ?"

ಶ್ರೀಕೃಷ್ಣ ಉತ್ತರಿಸಿದ: "ದೇವ ಸ್ವರೂಪಿ ತಾಯಿಯೆ ನನ್ನನ್ನು ಕ್ಷಮಿಸಿ. ಆದರೆ ಕಳೆದ ಜನ್ಮದಲ್ಲಿ ಹದಿನಾಲ್ಕು ವರ್ಷಗಳ ಕಾಲ ನೀನು ನನ್ನನ್ನು ಕಾಡಿಗೆ ಏಕೆ ಕಳುಹಿಸಿದೆ?"??

ದೇವಕಿಯು ಆಶ್ಚರ್ಯಚಕಿತಳಾಗಿ: "ಕೃಷ್ಣ, ಇದು ಹೇಗೆ ಸಾಧ್ಯ? ನೀನು ಯಾಕೆ ಹೀಗೆ ಹೇಳುತ್ತಿದ್ದೀ?"

ಕೃಷ್ಣನು ಉತ್ತರಿಸಿದ: "ಅಮ್ಮಾ ನಿಮ್ಮ ಹಿಂದಿನ ಜನ್ಮದ ಬಗ್ಗೆ ನಿಮಗೆ ಏನೂ ನೆನಪಿಲ್ಲ. ಆದರೆ ನಿಮ್ಮ ಹಿಂದಿನ ಜನ್ಮದಲ್ಲಿ ನೀವು ಕೈಕೇಯಿಯಾಗಿದ್ದೀರಿ ಮತ್ತು ನಿಮ್ಮ ಪತಿ ದಶರಥನಾಗಿದ್ದ."

ದೇವಕಿಯು ಆಶ್ಚರ್ಯಚಕಿತಳಾದಳು ಮತ್ತು ಕುತೂಹಲದಿಂದ ಕೇಳಿದಳು:

"ಹಾಗಾದರೆ ಈಗ ಕೌಸಲ್ಯ ಯಾರು?"

ಶ್ರೀ ಕೃಷ್ಣ ನಗುತ್ತ ಉತ್ತರಿಸಿದ:

"ತಾಯಿ ಯಶೋದಾ. ಹದಿನಾಲ್ಕು ವರ್ಷಗಳ ತಾಯಿಯ ಪ್ರೀತಿಯು ಅವಳ ಹಿಂದಿನ ಜನ್ಮದಲ್ಲಿ ನಿನ್ನಿಂದಾಗಿ ವಂಚಿತವಾಯಿತು. ಅದನ್ನು ಅವಳು ಈ ಜೀವನದಲ್ಲಿ ಪಡೆದುಕೊಂಡಿದ್ದಾಳೆ".

ನೆನಪಿಡಿ

ಪ್ರತಿಯೊಬ್ಬರೂ ತಮ್ಮ ಕರ್ಮದ ಫಲವನ್ನು ಅನುಭವಿಸಬೇಕು

ದೇವತೆಗಳು ಕೂಡ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

ಇನ್ನು ನೀವು ಯಾವ ಕರ್ಮವನ್ನು ಸಂಪಾದಿಸಬೇಕು ಎಂಬುದರ ಮೇಲೆ ಕಣ್ಣಿಡಿ.

ಹರಿ ಓಂ...!

ನೀ ಮಾಡಿದ ಪೂರ್ವ ಜನ್ಮದ ಫಲ ಖಂಡಿತವಾಗಿಯೂ ಬಿಡದು.

Monday, January 29, 2024

Siddhartha Gautama Buddha

ಗೌತಮ ಬುದ್ಧ


ವೈಶಾಲಿಯಲ್ಲಿದ್ದಾಗ, `ಮೌಲಿಂದಪುತ್ತ' ಅಂತ ಒಬ್ಬ ಬುದ್ದನನ್ನು ನೋಡೋಕೆ ಬಂದ. ಅವನು ಬಹಳ  ಓದಿ ಎಲ್ಲವನ್ನು ತಿಳಿದುಕೊಂಡಿದ್ದ. ವೇದ, ಪುರಾಣ, ಉಪನಿಷತ್ತು, ಇವುಗಳನ್ನೆಲ್ಲಾ ಕರತಲಾಮಲಕ ಎನ್ನುವಂತೆ ಅರೆದು ಕುಡಿದಿದ್ದ. ಯಾವ ರೀತಿ ಸುತ್ತಿಬಳಸಿ ಕೇಳಿದರೂ ಅವನು ಎಲ್ಲವನ್ನೂ ಹೇಳುವಷ್ಟು  ಜ್ಞಾನವಂತನಾಗಿದ್ದ. ಅಂದಿನ ದಿನಗಳಲ್ಲಿ ಹೀಗೆ ವಿಪರೀತ ತಿಳಿದುಕೊಂಡವರು ತಮ್ಮ ಬುದ್ಧಿಮತ್ತೆಯನ್ನು ಬೇರೆ ಪಂಡಿತರೊಂದಿಗೆ ವಾದ ಮಾಡಿ ಗೆದ್ದು, ಸೋತವರಿಂದ ಜಯ ಪತ್ರವನ್ನು ಪಡೆದುಕೊಳ್ಳಬೇಕೆಂಬ ಆಕಾಂಕ್ಷೆ ಇಟ್ಟುಕೊಂಡಿರುತ್ತಾರೆ. ಈ ಮೌಲಿಂಗ ಪುತ್ತ ಸಹ ಇದಕ್ಕೆ ಹೊರತಾಗಿರದೆ ಈಗಾಗಲೇ ಅನೇಕ ಕಡೆ ತನ್ನ ಪಾಂಡಿತ್ಯವನ್ನು ಬೇರೆ ಪಂಡಿತರೊಂದಿಗೆ ವಾದ ಮಾಡಿ ಗೆದ್ದು ಜಯ ಪತ್ರವನ್ನು ಸಾಕಷ್ಟು ಪಡೆದಿದ್ದನು. 

ಇನ್ನೂ ಒಂದಷ್ಟು ಕಡೆ ಹೊರಡುವ ಯೋಚನೆಯಲ್ಲಿದ್ದಾಗ, ಕೆಲವರು ಹೇಳಿದರು. ನೀನು ಅಲ್ಲಿ ಇಲ್ಲಿ ಹಲವು ಕಡೆ ಹೋಗುವುದಕ್ಕಿಂತ ನೇರವಾಗಿ ಬುದ್ಧನ ಬಳಿ ಹೋಗಿ ವಾದ ಮಾಡಿ ನೀನು ಜಯ ಪತ್ರವನ್ನು ಪಡೆಯಬಹುದು.

ಅದಕ್ಕಿಂತ ದೊಡ್ಡ ಜಯಪತ್ರ ಬೇರೆ ಯಾವುದೂ ಇರುವುದಿಲ್ಲ ಎಂದರು.

ಇದನ್ನು ತಿಳಿದುಕೊಂಡ `ಮೌಲಿಂದಪುತ್ತ'  ವಾದ ಮಾಡಬೇಕೆಂದು ಬುದ್ಧನ ಬಳಿ ಬಂದಿದ್ದನು. `ಗೌತಮಬುದ್ಧ' ವೃಕ್ಷದ ಕೆಳಗೆ ಕುಳಿತಿದ್ದನು. ಮೌಲಿಂದಪುತ್ತ ಅವನೆದುರಿಗೆ  ಧಿಮಾಕಿನಿಂದಲೇ ನಿಂತಿದ್ದನು. ತಾನು ಬಹಳ ತಿಳಿದಿದ್ದೇನೆ ಎಂಬ ಅಹಂಕಾರ ಅವನೊಳಗೆ ಇತ್ತು. ಬುದ್ಧ ಅವನನ್ನು ನೋಡಿ, ಏನಪ್ಪ ಬಂದಿದ್ದು, ಎಂದು ಕೇಳಿದಾಗ, ನನ್ನ ಹೆಸರು `ಮೌಲಿಂದಪುತ್ತ' ನೀವು ನನ್ನ ಹೆಸರು ಕೇಳಿರಬೇಕು ಅಲ್ಲವೇ? ಎಂದ. ಹೌದೌದು ನಿಮ್ಮ ಹೆಸರು ಕೇಳಿದ್ದೇನೆ. ಯಾರಿಗೆ ನನ್ನ ಹೆಸರುಗೊತ್ತಿಲ್ಲ ಬಿಡಿ, ಈಗ ನಾನು ಬಂದಿರುವುದು ನಿಮ್ಮೊಂದಿಗೆ ಚರ್ಚೆ ಮಾಡಲು, ಅಂದರೆ `ವಾದ' ಈಗಲೇ ಮಾಡೋಣವೋ ಅಥವಾ ಇನ್ನೆರಡು ದಿನ ಬಿಟ್ಟು ಅಥವಾ ಯಾವತ್ತು  ಮಾಡಬೇಕೆಂದು ತಿಳಿಸುವಿರೊ? ಹೇಗೆ? ಎಂದು ಕೇಳಿದ. ಬುದ್ಧನು ಇವತ್ತೇ ಬೇಡ ಎರಡು ದಿನ ಹೋಗಲಿ ನಾನೇ ತಿಳಿಸುತ್ತೇನೆ ಎಂದು ಅವನ ಮುಖ ನೋಡಿ ಸ್ವಲ್ಪ ನಕ್ಕನು. 

ಇದನ್ನು ನೋಡಿದ `ಮೌಲಿಂದ ಪುತ್ತ' ಯಾಕೆ ನನ್ನ ನೋಡಿ ಯಾಕೆ ನಗುತ್ತೀ ಎಂದ. ನಗುವಂಥದ್ದು ಏನಾಗಿದೆ ಹೇಳಿ? ಅದಕ್ಕೆ ಬುದ್ಧ ಏನು ಇಲ್ಲಪ್ಪ ಹಾಗೇ ಏನೋ ನೆನಪಾಯಿತು ಅದಕ್ಕೆ ನಕ್ಕೆ ಅಷ್ಟೇ ಅಂದ. ಇಲ್ಲ ನಾನು ನಂಬುವುದಿಲ್ಲ ಅದು ಸುಮ್ಮನೆ ನಕ್ಕ ನಗು ಅಲ್ಲ ಏನು ಅಂತ ಹೇಳಲೇಬೇಕು ಎಂದು ಮಂಡು ಬಿದ್ದ. ಹೋಗ್ಲಿ ಬಿಡು ಮತ್ತೆ ಯಾಕೆ ಸಮಯ ಹಾಳು ಎಂದ. ಅದು ಸಾಧ್ಯವಿಲ್ಲ ನನ್ನ ನೋಡಿ ಯಾಕೆ ನಕ್ಕಿದ್ದು ಹೇಳು ಅಂದ. 

ಆಗ ಬುದ್ಧ ಹೇಳತೊಡಗಿದ. ನಾನು ಒಂದೆರಡು ವರ್ಷಗಳ ಹಿಂದೆ ಚಾತುರ್ಮಾಸಕ್ಕಾಗಿ ಬೇರೆ ಪ್ರಾಂತ್ಯಕ್ಕೆ ಹೋಗಿದ್ದೆ. ಅಗ ನಾಲ್ಕು ತಿಂಗಳು ಅಲ್ಲಿ ಇರಲೇಬೇಕು. ಅದೊಂದು ಹಳ್ಳಿ. ಊರ ತುದಿ ಮೇಲ್ಗಡೆಗೆ ಒಂದು ಮನೆ ಇತ್ತು. ಮನೆಯ ಮುಂದಿನ ಜಗಲಿ ಮೇಲೆ ಒಬ್ಬ ಮನುಷ್ಯ ಕುಳಿತುಕೊಳ್ಳುತ್ತಿದ್ದ. ಪ್ರತಿನಿತ್ಯವೂ ಅದೇ ಮನುಷ್ಯ ಅದೇ ಜಾಗದಲ್ಲಿ ಕುಳಿತುಕೊಂಡಿರುತ್ತಿದ್ದ. ಇದನ್ನು ನಾನು ಪ್ರತಿದಿನ ನೋಡುತ್ತಿದ್ದೆ. ಬೆಳಕು ಹರಿಯುತ್ತಿದ್ದಂತೆ ಊರಿನ ಸುತ್ತಮುತ್ತ ಇರುವ ಹಳ್ಳಿಗಳ ಎತ್ತು, ಎಮ್ಮೆ, ಕುದುರೆ, ಆಡು, ಮೇಕೆ, ಹೀಗೆ ಎಲ್ಲಾ ಪ್ರಾಣಿಗಳು ಇವನ ಮನೆ ಮುಂದೆ  ಹಾದು ಮೇಯಲು ಕಾಡಿಗೆ ಹೋಗುತ್ತಿದ್ದವು. ಈ ಮನುಷ್ಯ ಅಲ್ಲಿಂದ ಹೋಗುವ ಪ್ರತಿಯೊಂದು ಎಮ್ಮೆ, ಎತ್ತು, ಆಡು, ಕುದುರೆ, ಹಸು-ಕರು ಪ್ರತಿಯೊಂದನ್ನು ಎಣಿಕೆ ಮಾಡುತ್ತಿದ್ದ. 

ಯಾವುದು ಎಷ್ಟು ಇದೆ ಎಂದು ಲೆಕ್ಕ ಇಟ್ಟುಕೊಳ್ಳುತ್ತಿದ್ದ. ಅವು ಮೇವು ಮೇಯಲು ಹೋಗಿದ್ದು, ಸಂಜೆ ವಾಪಸ್ಸು ಬರುತ್ತಿದ್ದ ಹಾಗೆ ಮತ್ತೆ ಇವನು ಅವುಗಳನ್ನೆಲ್ಲ ಲೆಕ್ಕ ಮಾಡುತ್ತಿದ್ದನು. ಎಷ್ಟು ಪ್ರಾಣಿಗಳು ಹೋಗಿದ್ದವು, ಎಷ್ಟು ಪ್ರಾಣಿಗಳು ಬಂದವು, ಎಂಬುದು ಅವನಿಗೆ ಗೊತ್ತಿರುತ್ತಿತ್ತು. 

ಒಂದು ದಿನ ನಾನು ಅವನಲ್ಲಿಗೆ ಹೋಗಿ, ಏನಪ್ಪಾ ನಿತ್ಯವೂ ಹೀಗೆ ಹಸು, ಕುರಿ, ಕುದುರೆ, ಎತ್ತು, ಇವು ಹೋಗುವಾಗಲೂ ಎಲ್ಲವನ್ನೂ ಲೆಕ್ಕ ಮಾಡುತ್ತಿ, ಅವು ಬಂದ ಮೇಲೂ ಲೆಕ್ಕ ಮಾಡುತ್ತಿ, ಇವುಗಳೆಲ್ಲಾ ನಿನ್ನವೇ? ಎಂದು ಕೇಳಿದ.

ಅದಕ್ಕೆ ಆ ಮನುಷ್ಯ ಛೇ ಛೇ ಎಲ್ಲಾದರೂ ಉಂಟೇ? ನಾನು ಬಡವ ನನ್ನ ಹತ್ತಿರ ಅಷ್ಟು ಎಲ್ಲಿ ಬರಬೇಕು ಎಂದ. ಅದಕ್ಕೆ ಬುದ್ಧ ಅದರಲ್ಲಿ ಒಂದು ಹಸುವಾದರೂ ನಿಂದಾಗಿದೆಯೇ? ಎಂದು ಕೇಳಿದ. ಇಲ್ಲ ಸ್ವಾಮಿ  ಒಂದು ಹಸುವು ನಂದಲ್ಲ ಎಂದ. ಹಾಗಾದರೆ ಮತ್ಯಾಕೆ ಲೆಕ್ಕ ಮಾಡುತ್ತಿ? ಎಂದು ಕೇಳಿದ. ಅದಕ್ಕೆ ಆ ಮನುಷ್ಯ ಹೀಗೆ ಸುಮ್ನೆ ನನಗೆ ಅದೊಂದು ಗೀಳು ಎಂದ. 

ನಿನ್ನನ್ನು ನೋಡಿದಾಗ ನನಗೆ ಅವನ ನೆನಪಾಯಿತು ಅದಕ್ಕೆ ನಕ್ಕೆ ಎಂದು ಮೌಲಿಂಗಪುತ್ತನಿಗೆ ಹೇಳಿದ. ಯಾಕೆಂದರೆ ನೀನು ಸಹ ಸಿಕ್ಕಾಪಟ್ಟೆ ಓದಿಕೊಂಡಿದ್ದಿ, ಆದರೆ ಒಂದಾದರೂ ನೀನು ಬರೆದಿದ್ದಾ? ಇಲ್ಲ ಅಲ್ಲವೇ? ವೇದ, ಪುರಾಣ, ಉಪನಿಷತ್ತು, ಎಲ್ಲವನ್ನೂ ಬೇರೆ ಬೇರೆಯವರೇ ಬರೆದಿದ್ದು. ಅದರಲ್ಲಿ ನಿನ್ನದೇ ಆದದ್ದು ಏನಾದರೂ ಇದೆಯಾ? ನಿನ್ನ ಸ್ವಂತ ಅನುಭವಕ್ಕೆ ಬಂದಿದ್ದು ಏನಾದರೂ ಇದೆಯಾ? ಅಥವಾ ನೀನು ಓದಿ ನಿನ್ನ ಅನುಭವಕ್ಕೆ ಬಂದಿದ್ದು ಇದೆಯಾ? ಎಂದೆಲ್ಲಾ ಪ್ರಶ್ನೆಗಳ ಸುರಿಮಳೆಯನ್ನೇ ಬುದ್ಧ ಹರಿಸಿದ. `ಮೌಲಿಂಗಪುತ್ತ'ನಿಗೆ ಏನು ಹೇಳಲು ಉತ್ತರವಿರಲಿಲ್ಲ. ಸ್ವಲ್ಪ ಹೊತ್ತು ಬಿಟ್ಟು ಬುದ್ಧನು ನೀನು  ಸ್ವಲ್ಪಕಾಲ ಇಲ್ಲೇ ಇರು. ಮುಂದಿನ ಹುಣ್ಣಿಮೆ ಹೊತ್ತಿಗೆ ನಾವು ಚರ್ಚೆ ಮಾಡೋಣ ಎಂದನು. 

ಈಗ ಕುಳಿತು ಯೋಚಿಸಿದ ಮೌಲಿಂಗಪುತ್ತನಿಗೆ, ಹೀಗಾಯಿತಲ್ಲ ಎಂದು ಚಿಂತೆ ಶುರುವಾಯಿತು. ಸರಿ ಬುದ್ಧ ಹೇಳಿದಂತೆ ಅವನು ಅಲ್ಲೇ ಇರತೊಡಗಿದ ಪ್ರತಿದಿನ ಮರದ ಕೆಳಗೆ ಕುಳಿತ ಬುದ್ಧನ ಹತ್ತಿರ ಬರುವ ಸಾವಿರಾರು ಜನರನ್ನು ಗಮನಿಸುತ್ತಿದ್ದ. ದಿನವೂ  ಸಾವಿರಾರು ಜನ ಬುದ್ಧನ ಹತ್ತಿರ ಬರುವರು. ಅಲ್ಲೇ ಕೆಲ ಸಮಯ ಕುಳಿತು ಹೊರಡುವ ಮುನ್ನ ಬುದ್ಧನಿಗೆ ನಮಸ್ಕರಿಸಿ ಹೋಗುವರು. ಇನ್ನೂ ಕೆಲವರು ತಮ್ಮ ಸಮಸ್ಯೆಗಳನ್ನು ಕೇಳುವರು. ಬುದ್ಧ ಅದಕ್ಕೆ ಏನಾದರೂ ಪರಿಹಾರ ಕೊಟ್ಟ ನಂತರ ನೆಮ್ಮದಿಯಿಂದ ಹೊರಡುವರು. ಹೀಗೆ ದಿನಂಪ್ರತಿ  ಸಾವಿರಾರು ಜನಗಳು ಬರುತ್ತಿದ್ದರು. ಬುದ್ಧ ಜನರನ್ನು ಪರಿವರ್ತನೆ ಮಾಡುತ್ತಿದ್ದ. 

ಅಷ್ಟೊತ್ತಿಗೆ ಹುಣ್ಣಿಮೆ ಬಂದಿತು. ಮೌಲಿಂಗಪುತ್ತನನ್ನು ಚರ್ಚೆಮಾಡಲು ಬುದ್ಧ ಕರೆದ. ಬುದ್ಧನ ಹತ್ತಿರ ಬಂದ ಮೌಲಿಂದಪುತ್ತ ತಾನು ತಂದಿದ್ದನ್ನೆಲ್ಲ ಬುದ್ಧನ ಪಾದದ ಹತ್ತಿರ ಇಟ್ಟು ದೀರ್ಘದಂಡ ನಮಸ್ಕಾರ ಮಾಡಿದ. ನನ್ನನ್ನು ಕ್ಷಮಿಸಿ, ಮತ್ತು ಹೇಳಿದ ನನಗೆ ಯಾವ ಚರ್ಚೆಯೂ ಬೇಡ. ದಯವಿಟ್ಟು ನಿಮ್ಮ ಶಿಷ್ಯನನ್ನಾಗಿ ನನ್ನನ್ನು ಸ್ವೀಕರಿಸಿ ಅಷ್ಟು ಸಾಕು. ಏಕೆಂದರೆ ನಾನು ಬೇಕಾದಷ್ಟು ಓದಿಕೊಂಡಿದ್ದೆ ಆದರೆ ಮನಸ್ಸನ್ನು ಪರಿವರ್ತನೆ ಮಾಡುವುದು ನನಗೆ ಗೊತ್ತಿರಲಿಲ್ಲ ನಿಮ್ಮನ್ನು ನೋಡಿ ನಾನು ಕಲಿತುಕೊಂಡೆ ಎಂದನು. 

ಕಲಿತ ವಿದ್ಯೆಯನ್ನು ಕಾರ್ಯರೂಪಕ್ಕೆ ತಂದಾಗ ಮಾತ್ರ ಅದರ ಸಾರ್ಥಕತೆ ಸಿಗುತ್ತದೆ. 

"ಬುದ್ಧಂ ಶರಣಂ ಗಚ್ಛಾಮಿ!

ಸಂಘಂ ಶರಣಂ ಗಚ್ಚಾಮಿ!

ದಮ್ಮಂ ಶರಣಂ ಗಚ್ಛಾಮಿ!..

Sunday, January 28, 2024

ಇಚ್ಛಾಶಕ್ತಿಯ ಮುಂದೆ ಎಂತಹ ಕಠಿಣತೆಯೂ ತಲೆಬಾಗುವುದು-ನಯವಾಗುವುದು


ಅಂದುಕೊಂಡಷ್ಟು ಕೆಲಸ ಸುಲಭವಾಗಿರಲಿಲ್ಲ. ಆದರೆ ಉದ್ದೇಶ ಮಾತ್ರ ಸ್ಪಷ್ಟವಾಗಿತ್ತು. ೪೦೦ ಕುಟುಂಬಗಳ ೧೪೦೦ ಜನರನ್ನು ಸ್ಥಳಾಂತರಿಸಬೇಕಾಯಿತು. ೩೧೪ ಮನೆಗಳನ್ನು ಖರೀದಿಸಬೇಕಾಯಿತು....

ಅಲ್ಲಿಯ ಒಂದು ಆಸ್ತಿಗೆ ನೂರಾರು ಮಾಲೀಕರು! 

ಅದನ್ನು ಬಾಡಿಗೆಗೆ ನೀಡಿದ್ದವರು, ಅದನ್ನು ಪುನಃ ಒಳಬಾಡಿಗೆಗೆ ನೀಡಿದವರು, ಲೀಸ್‌ಗೆ ತೆಗೆದುಕೊಂಡವರು, ಈ ನಡುವೆ ಚುಚ್ಚಿಕೊಡುವವರ ಮಾತು ಕೇಳಿಕೊಂಡು ಕಾನೂನು ಮೊರೆ ಹೋಗುವ ಬೆದರಿಕೆ ಹಾಕಿದವರು, ಉದ್ದೇಶಪೂರ್ವಕವಾಗಿ ಅನಗತ್ಯ ಅಡಚಣೆ ಮಾಡಲು ಸಜ್ಜಾದವರು - ಒಂದಾ ಎರಡಾ ನೂರಾರು!  

ಕಾನೂನು ತಂತ್ರಗಳನ್ನು ತಪ್ಪಿಸಿ, ಅವರ ಮನವೊಲಿಸಿ, ಸೂಕ್ತ ಪರಿಹಾರನೀಡಿ, ನಿಜಕ್ಕೂ ಅಗತ್ಯವಿದ್ದವರಿಗೆ ಬೇರೆಡೆ ಮನೆಗಳನ್ನು ಕಟ್ಟಿಕೊಡುವುದರಿಂದ ಹಿಡಿದು ಎಲ್ಲವನ್ನೂ ಸುಗಮವಾಗಿ ನಿಭಾಯಿಸಿದ ಅಂಶದಿಂದ ಸಂಕೀರ್ಣತೆಯನ್ನು ಅಳೆಯಬಹುದು.

ಅನಂತರ ಕೆಡವಲ್ಪಟ್ಟ ಮನೆಗಳಿಂದ, ಸುಮಾರು ೪೦ ಪುರಾತನ ದೇವಾಲಯಗಳು ಕಂಡುಬಂದವು..! ಅವುಗಳಿಗೂ ಸಹ ಸೂಕ್ತ ಸ್ಥಳ ಒದಗಿಸಲಾಯಿತು. ಕಾಶಿ ವಿಶ್ವನಾಥನ ಸಂಕೀರ್ಣವು ೨೦೦೦ ಚದರ ಮೀಟರ್‌ನಿಂದ ಈಗ ೫೨ ಸಾವಿರ ಚದರ ಮೀಟರ್‌ಗೆ ಹೆಚ್ಚಾಗಿದೆ....!!

ಹರಹರ ಮಹಾದೇವ ನಮೋ ಕಾಶಿ ವಿಶ್ವನಾಥ

ಇದು ಮೋದಿಯ ನವಭಾರತ...

ಅತ್ತ ಕಾಶಿಯಲ್ಲಿ ಮೋದಿಜಿ ಪೂಜೆ ಮಾಡುವಾಗ, ಇತ್ತ ೧೨ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ರಾಷ್ಟ್ರದ ಗಣ್ಯರಿಂದ ಏಕಕಾಲದಲ್ಲಿ ಪೂಜೆ...

ಅತ್ತ ಕಾಶಿಯಲ್ಲಿ ಪ್ರಧಾನಿ ಮೋದಿಯವರು ಕಾಶಿ ವಿಶ್ವನಾಥನಿಗೆ ಪೂಜೆ ನೆರವೇರಿಸುತ್ತಿದ್ದರೆ, ಇತ್ತ ಅದೇ ಸಮಯದಲ್ಲಿ ಗೃಹಸಚಿವ ಅಮಿತ್ ಶಾ ರವರು ಗುಜರಾತಿನ ಸೋಮನಾಥನಿಗೆ ಪೂಜೆ ನೆರವೇರಿಸಿದರು. ಆಂಧ್ರಪ್ರದೇಶದ ಶ್ರೀಶೈಲಂನಲ್ಲಿ ಮಲ್ಲಿಕಾರ್ಜುನ ಸ್ವಾಮಿಗೆ ಸಚಿವೆ ನಿರ್ಮಲಾ ಸೀತಾರಾಮನ್ ಪೂಜೆ ಮಾಡಿದರು. ಇನ್ನು ಮಧ್ಯಪ್ರದೇಶದ ಉಜ್ಜಯನಿಯ ಮಹಾಕಾಳೇಶ್ವರನಿಗೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಮಧ್ಯಪ್ರದೇಶದ ಕ್ವಾಂಡ್ವಾದಲ್ಲಿ ಓಂಕಾರೇಶ್ವರನಿಗೆ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಜಾರ್ಖಂಡ್‌ನ ದೇವಘಡದಲ್ಲಿ ವೈದ್ಯನಾಥನಿಗೆ ಸಚಿವ ಅರ್ಜುನ್ ಮುಂಡಾ, ಮಹಾರಾಷ್ಟ್ರದ ಭೀಮಾಶಂಕರದಲ್ಲಿ ಸಚಿವ ನಾರಾಯಣ ರಾಣೆ, ಔರಂಗಾಬಾದ್‌ನಲ್ಲಿ ಘೃಷ್ಮೇಶ್ವರನಿಗೆ ಸಚಿವ ನಿತಿನ್ ಗಡ್ಕರಿ, ನಾಸಿಕ್‌ನ ತ್ರಯಂಬಕೇಶ್ವರದಲ್ಲಿ ಸಚಿವ ಪಿಯುಷ್ ಗೊಯಲ್, ತಮಿಳುನಾಡಿನ ರಾಮೇಶ್ವರನಿಗೆ ಸಚಿವ ಎಲ್ ಮುರುಗನ್, ಗುಜರಾತಿನ ದ್ವಾರಕಾದ ನಾಗೇಶ್ವರನಿಗೆ ಸಿಎಂ ಭೂಪೇಂದ್ರ ಪಟೇಲ್, ಕೇದಾರನಾಥನಿಗೆ ಉತ್ತರಖಂಡದ ಸಿಎಂ ಪುಷ್ಕರ ಸಿಂಗ್ ಧಮನಿ ವಿಶೇಷ ಪೂಜೆ ಸಲ್ಲಿಸಿದರು. ಐತಿಹಾಸಿಕ ಕ್ಷಣದಲ್ಲಿ ದೇಶದ ೧೨ ದ್ವಾದಶ ಪವಿತ್ರ ಕ್ಷೇತ್ರಗಳಲ್ಲಿ ಏಕಕಾಲದಲ್ಲಿ ರಾಷ್ಟ್ರದ ಕಲ್ಯಾಣಕ್ಕಾಗಿ ಬಿಜೆಪಿ ನಾಯಕರು ಪೂಜೆ ನೆರವೇರಿಸಿದರು..

ಧನ್ಯ ಭಾರತ...

Saturday, January 27, 2024

ಹೊಸ್ತಿಲಿಗೆ ರಂಗೋಲಿ ಹಾಕುವ ಕ್ರಮ


ಮನುಷ್ಯನ ದೇಹಕ್ಕೆ ತಲೆ ಹೇಗೆ ಶ್ರೇಷ್ಠ ನೋ ಹಾಗೆ ಮನೆಗೆ ಮುಂಬಾಗಿಲು ಶ್ರೇಷ್ಠ .ಅದನ್ನು ನಾವು ತಲೆಬಾಗಿಲು ಅಂತಾನೇ ಕರಿತೇವೆ. ಮನೆ ಕಟ್ಟುವಾಗ ನಾವು ಎರಡು ಸಲ ಮೂಹೂರ್ತ ನೋಡುತ್ತೇವೆ . ಒಂದು ಭೂಮಿ ಪೂಜೆ , ಇನ್ನೊಂದು ಚೌಕಟ್ಟು ಪೂಜೆಗೆ. ಅಷ್ಟು ಮಹತ್ವ ಇದೆ ಆ ತಲೆ ಬಾಗಿಲಿಗೆ ಯಾವಾಗಬೇಕೊ ಆವಾಗ ಕೂಡಿಸಬಾರದು ಚೌಕಟ್ಟು ಕೂಡಿಸುವಾಗ ಸ್ಥಿರ ಲಗ್ನ ವಿರಬೇಕು , ಶುಭ ತಿಥಿ ,ವಾರ ಮತ್ತು ನಕ್ಷತ್ರ ಗಳಿದ್ದಾಗ ಮಾತ್ರ ಮುತ್ತು.,ರತ್ನ ,ಹವಳ ಬಂಗಾರ ಮತ್ತು ಬೆಳ್ಳಿ , ಹಾಲು ತುಪ್ಪವನ್ನು ಹಾಕಿ ಬ್ರಾಹ್ಮಣರು ಮಂತ್ರಗಳೊಂದಿಗೆ ವಾಸ್ತು ಪುರುಷನ ಆಹ್ವಾನ ಮಾಡಿಕೊಳ್ತಾರೆ . ಅದಕ್ಕೆ ಅಷ್ಟು ಮಹತ್ವವಿದೆ ಆ ಮುಂಬಾಗಿಲು ಚೌಕಟ್ಟು ಹೊಸ್ತಿಲಕ್ಕೆ..ಅದಕ್ಕೆ ದಿನಾಲೂ ತೊಳೆದು ರಂಗವಲ್ಲಿ ಹಾಕಿದಾಗ ಲಕ್ಷೀ ಪ್ರಸನ್ನತೆ ದೊರೆಯುತ್ತದೆ. ಯಾವ ದುಷ್ಟ ಶಕ್ತಿ ಕೂಡಾ ರಂಗವಲ್ಲಿ ದಾಟಿ ಒಳಗಡೆ ಬರೊದಿಲ್ಲ. ನಿಮಗೆ ಗೊತ್ತಿರಬಹುದು ಮನೆಯಲ್ಲಿ ಶ್ರಾದ್ಧ ದಿನ ನಾವು ಬಾಗಿಲಿಗೆ ರಂಗೋಲಿಯನ್ನು ಹಾಕುವದಿಲ್ಲ ಕಾರಣ ಪಿತೃಗಳನ್ನು ಆಹ್ವಾನ ಮಾಡಿರುತ್ತೇವೆ. ಪಿತೃಗಳು ಬರುತ್ತಾರೆ ಅಂತ ಅದಕ್ಕೆ ಬಾಗಿಲಿಗೆ ರಂಗೋಲಿ ಹಾಕುವದರಿಂದ ಆಪತ್ತುಗಳು ದೂರವಾಗುತ್ತವೆ. ದಯವಿಟ್ಟು ಎಲ್ಲ ಹೆಣ್ಣು ಮಕ್ಕಳು ದಿನಾಲೂ ಹೊಸ್ತಿಲು ತೊಳೆದು ರಂಗೋಲಿ ಬಿಡಿಸಿ ...

ಹೊಸ್ತಿಲವನ್ನು ನಾವು ಎರಡು ಭಾಗವನ್ನಾಗಿ ಮಾಡಿದಾಗ , ಒಂದು ಎಡ ಮತ್ತು ಬಲ ಮದ್ಯೆ ಒಳ ಬರುತ್ತಿರುವ ಹಾಗೆ ಗೌರಿ ಪಾದ ಎಡಕ್ಕೆ ಹನ್ನೆರಡು ಎಳೆ ಮತ್ತು ಬಲಕ್ಕೆ ಹನ್ನೆರಡು ಎಳೆ ಒಟ್ಟು ಇಪ್ಪತ್ತುನಾಲ್ಕು ಎಳೆಗಳನ್ನು ಬಿಡಿಸಬೇಕು . ಯಾಕೆ ಇಪ್ಪತ್ತನಾಲ್ಕು ಅಂದರೆ ಅವು ಭಗವನ್ನಾಮಗಳು . ನಂತರ ಎರಡು ಶಂಖ ,ಎರಡು ಚಕ್ರ ಶಂಖ ಚಕ್ರ ವಿಷ್ಣವಿನ ಲಾಂಛನಗಳು ಎಲ್ಲಿ ಶಂಖ ಚಕ್ರ ವಿರುತ್ತೊ ಅಲ್ಲಿ ವಿಷ್ಣು ಇರತ್ತಾನೆ , ಎಲ್ಲಿ ವಿಷ್ಣು ಇರುತ್ತಾನೆಯೋ ಅಲ್ಲಿ ಸಾಕ್ಷಾತ್ ಲಕ್ಷೀ ವಾಸವಿರುತ್ತೆ. ನಂತರ , ನಾಲ್ಕು ಸ್ವಸ್ತಿಕ ಎಡಕ್ಕೆ ಎರಡು ಮತ್ತು ಬಲಕ್ಕೆ ಎರಡು ಹಾಕಬೇಕು. ಸ್ವಸ್ತಿಕ ಯಾಕೆ ಅಂದರೆ ಮನೆ ಸ್ವಸ್ತವಾಗಿರುತ್ತೆ. ಸ್ವಸ್ತಿಕ ವನ್ನು ದಾಟಿ ಹೋದಾಗ ನಾವು ಎಲ್ಲೇ ಇರಲಿ ಸ್ವಸ್ತವಾಗಿರಲಿ ಅಂತ . ಹೊಸ್ತಿಲಿನ ರಂಗೋಲಿ ಮುಗಿಸಿ ಬಾಗಿಲಿನ ಎಡ ಮತ್ತು ಬಲ ಚಿತ್ರದಲ್ಲಿ ನೋಡಿ ಅಲ್ಲಿ ಬಲ ಜಯ ಮತ್ತು ಎಡಗಡೆ ವಿಜಯ ಹಾಕಬೇಕು ಅಲ್ಲಿ ಕೂಡಾ ಶಂಖ ಚಕ್ರ ಗದೆ ಮತ್ತು ಕಮಲವನ್ನು ಬಿಡಿಸಬೇಕು. ಯಾಕೆ ಅಂದರ ನಾವು ಮನೆಯಲ್ಲಿ ವಿಷ್ಣುವಿನ ಪೂಜೆ ಮಾಡುತ್ತೇವೆ.  ಅಂದ ಮೇಲೆ ಜಯ ವಿಜಯರು ಬಾಗಿಲಲ್ಲಿ ಇರಲೇ ಬೇಕು... ನಂತರ ತುಳಸಿ ಮುಂದೆ ತುಳಸಿ ಯಲ್ಲಿ ಸಾಕ್ಷಾತ್ ವಿಷ್ಣುವೇ ವಾಸವಾಗಿರುತ್ತಾನೆ . ಅಂದ ಮೇಲೆ ತುಳಸಿ ಮುಂದೆ ಪದ್ಮವನ್ನು ಶಂಖ ಚಕ್ರ ಆಕಳ ಪಾದ ಹಾಕಿ . ಒಂದು ಹೊತ್ತಾದರೂ ತುಳಸಿ ಮುಂದೆ ದೀಪ ಹಚ್ಚಿ . ನಿಮಗೆ ಸಮಯವಿಲ್ಲದಿದ್ದರೂ ಕೆಲವು ನಿಯಮಗಳನ್ನಾದರೂ ಪಾಲಿಸಿ ತಾನಾಗಿಯೇ ಮನೆಯಲ್ಲಿ ಶಾಂತಿ ನೆಮ್ಮದಿ ಸಿಗುತ್ತೆ. ಹಣದಿಂದ ನಾವು ಏನೆಲ್ಲ ಕೊಂಡು ಕೊಳ್ಳಬಹುದು ಆದರೆ ಮನಸ್ಸಿಗೆ ಶಾಂತಿ ನೆಮ್ಮದಿಯನ್ನಲ್ಲ. ಅದು ಸಿಗಬೇಕು ಅಂದರೆ ನಮ್ಮ ಪೂರ್ವಜರು ಹೇಳಿಕೊಟ್ಟ ಸಂಪ್ರದಾಯ ಗಳನ್ನು ಆಚರಿಸಿದಾಗ ಮಾತ್ರ ಸಾಧ್ಯ.....